Our book with Wiley on AI

Thanks, Nisha. Thanks for your kind words. I learned a lot from you, Wil and Michael. I enjoyed being your editor! I benefited greatly from ...

Showing posts with label Kannada. Show all posts
Showing posts with label Kannada. Show all posts

Friday, November 11, 2022

ನೆನಪಿಗೆ ಒಂದು ನಗೆ

 ನೆನಪಿಗೆ ಒಂದು ನಗೆ 

ನಮ್ಮ ಹತ್ತಿರ  ಬಂಗಾರದ ಬಣ್ಣದ ಮೀನುಗಳು ಇದ್ದವು 

ಅವು ದಪ್ಪನೆಯ ಕರ್ಟನ್ ನ,  ಚಿತ್ರದ ಕಿಟಕಿಯ ಪಕ್ಕದ 

ಟೇಬಲ್ ಮೇಲಿನ, ಬಾಕ್ಸ್ ನಲ್ಲಿ ಸುತ್ತಿ ಸುತ್ತಿ   ತಿರುಗುತ್ತಾ  ಇದ್ದವು 


ನಮಮ್ಮ ಯಾವಾಗಲೂ ನಗುತ್ತಾ ನಮ್ಮೆಲ್ಲರ ಸಂತೋಷ ಬಯಸುತ್ತಾ 

ಹೇಳಿದಳು "ಸಂತೋಷ ವಾಗಿರು ಹೆನ್ರಿ". ಅವಳು ಹೇಳುವುದೂ ನಿಜ 

ಸಂತೋಷವಾಗಿರಬೇಕು, ನಮಗೆ ಸಾಧ್ಯ  ವಾದರೆ 


ಆದರೆ ನಮ್ಮಪ್ಪ, ಅವನ ಆರು ಅಡಿ ಆಕಾರದ ಒಳಗೆ 

ಏನು  ಉರಿಯುತ್ತಿದೆ ಅಂತ ಅರಿಯದೇ, ಸಿಟ್ಟಿಗೆದ್ದು 

ಅವಳನ್ನೂ ನನ್ನನ್ನೂ  ವಾರದಲ್ಲಿ ಬಹಳ ಬಾರಿ 

ಹೊಡೆಯುವುದು ಮುಂದುವರಿಸಿದ 


ನಮ್ಮಮ್ಮ ಬಡ ಮೀನು 

ಸಂತೋಷವಾಗಿ ಇರಬೇಕೆಂದು, ವಾರದಲ್ಲಿ 

ಎರಡು ಮೂರು ಬಾರಿ ಹೊಡೆತ ತಿಂದು 

ನನಗೆ ಸಂತೋಷವಾಗಿ ಇರಲು ಹೇಳುತ್ತಾ ಇದ್ದಳು 

"ಹೆನ್ರಿ  ನಗುತ್ತಾ ಇರು. ನೀನ್ಯಾಕೆ ನಗೋದೇ ಇಲ್ಲಾ"


ಆಗ ಅವಳು ನಗುತ್ತಿದ್ದಳು  ನನಗೆ ನಗುವುದು ಹೇಗೆ ಅಂತ 

ತೋರಿಸಿಕೊಡಲು. 

ಅದು ನಾನು ನೋಡಿದರಲ್ಲೇ  ಅತ್ಯಂತ ದುಃಖದ ನಗು. 


ಒಂದು ದಿನ ಎಲ್ಲಾ ಮೀನುಗಳು  ಸತ್ತು  ಹೋದವು 

ಎಲ್ಲಾ ಐದೂ ನೀರಿನಲ್ಲಿ ತೇಲುತ್ತಾ  ಇತ್ತ 

ಅವುಗಳ ಬದಿ ಭಾಗದ , ಕಣ್ಣು ಇನ್ನೂ 

ಬಿಟ್ಟೇ  ಇತ್ತು. 


ನಮ್ಮಪ್ಪ ಮನೆಗೆ ಬಂದವನೇ ಅದನ್ನು 

ನಮ್ಮ ಅಡಿಗೆ ಮನೆಯ ನೆಲದ ಮೇಲೆ ಚೆಲ್ಲಿ,

ಬೆಕ್ಕಿಗೆ ಹಾಕಿದ. ನಾವು ಹಾಗೇ  ನೋಡುತ್ತಾ  

ಇದ್ದೆವು  ನಮ್ಮಮ್ಮ ನಗುವುದನ್ನು 


ಚಾರಲ್ಸ್  ಬುಕೋವಸ್ಕಿ   



Sunday, May 30, 2021

The prophet - Khalil Gibran - Kannada translation

 Here is the  my translation of book "the prophet" by Khalil Gibran.  

ಖಲೀಲ್ ಗಿಬ್ರಾನ್ ಅವರ "ಪ್ರವಾದಿ" ಪುಸ್ತಕದ ನನ್ನ ಅನುವಾದ ಇಲ್ಲಿದೆ.

https://drive.google.com/file/d/0B2i2aNHkkZC9VFZrdExCTmhJd3M/view


Friday, December 9, 2016

ಆರಿಸಿ ಕೊಳ್ಳದ ದಾರಿ

ಎರಡು ದಾರಿಗಳು ಒಣಗಿದ  ಕಾಡಿನಲ್ಲಿ ಕವಲಾದವು
ಕ್ಷಮಿಸಿ, ಎರಡೂ ದಾರಿಗಳಲ್ಲಿ ಹೋಗಲಾಗುತ್ತಿರಲಿಲ್ಲ
ಒಬ್ಬನೇ ಪ್ರವಾಸಿಯಾದ್ದರಿಂದ
ಬಹಳ ಕಾಲದವರೆಗೆ ನಿಂತೆ  ನನ್ನ ಕಣ್ಣಿಗೆ ಕಾಣುವ ವರೆಗೆ
ಒಂದು ದಾರಿ ಜಡ್ಡುಗಳಲ್ಲಿ ತಿರುಗುವವರೆಗೆ

ಆಮೇಲೆ ಇನ್ನೊಂದು ದಾರಿ ಆರಿಸಿಕೊಂಡೆ
ಬಹುಶಃ ಅದು ಹಸಿರಾಗಿತ್ತು, ಅದು ಸವೆಯ ಬೇಕಾಗಿತ್ತು
ಅಲ್ಲದೆ ಯಾರದ್ದೂ ಆಗಿರದರಿಂದ, ನನ್ನದಾಗಬಹುದಿತ್ತು
ಆದರೂ, ಹೋಗುವುದು  ಎರಡರಲ್ಲೂ  ಇತ್ತು

ಆ ಮುಂಜಾನೆ  ಸರಿಸಮವಾಗಿದ್ದವು ಎರಡೂ
ಎಲೆಗಳಮೇಲೆ ಯಾವ ಹೆಜ್ಜೆಗಳ ಕಪ್ಪೂ ಇರಲಿಲ್ಲ
ಒಹ್! ನಾನು ಮೊದಲನೆಯದನ್ನು ಇನ್ನೊಂದು ದಿನಕ್ಕಾಗಿ ಇಟ್ಟೆ
ತಿಳಿದೇ ಇದೆ ಹೇಗೆ ಒಂದು ದಾರಿ ಇನ್ನೊಂದಕ್ಕೆ ಕೊಂಡಿಯಾಗಿತ್ತದೆ
ಸಂಶಯ ಇತ್ತು  ನನಗೆ ಯಾವಾಗಾದರೂ ತಿರಿಗಿ ಬರಬಹುದಾ ಅಂತ

ನಾನು ಹೇಳುತ್ತೇನೆ ನಿಮಗೆ ನಿಟ್ಟುಸಿರುಬಿಟ್ಟು
ಬಹಳ ಕಾಲಗಳ ಹಿಂದೆ ಎಲ್ಲೂ ಒಂದುಕಡೆ  
ಎರಡು ದಾರಿಗಳು ಒಣಗಿದ ಕಾಡಿನಲ್ಲಿ ಬಯಲಾದವು
ನಾನು ಜನ ಕಡಿಮೆ ಬಳಸಿದ ದಾರಿ ಆರಿಸಿಕೊಂಡೆ
ಅದು ಈ  ಎಲ್ಲ ವ್ಯತ್ಯಾಸ ಮಾಡಿದೆ

ರಾಬರ್ಟ್ ಫ್ರಾಸ್ಟ್


Friday, October 14, 2016

ಸ್ವಾತಂತ್ರ್ಯ

ಸ್ವಾತಂತ್ರ್ಯ

ಊರಿನ ದ್ವಾರದ ಬಳಿ,
ನಿಮ್ಮ ಹೊಡಸಲು ಬೆಂಕಿ ಪಕ್ಕದಲ್ಲಿ
ನಿಮ್ಮದೇ, ಸ್ವಾತಂತ್ರ್ಯವನ್ನು ಪೂಜಿಸಲು ನಿವು
ಬಾಗಿ ನಮಸ್ಕರಿಸಿದ್ದುದನ್ನು ನಾನು ನೋಡಿದ್ದೇನೆ.

ಹೇಗೆ ಗುಲಾಮರು
ಅವರನ್ನು ಕತ್ತರಿಸುತ್ತಾ ಇದ್ದರೂ ಆ
ಕ್ರೂರಿಯನ್ನು ಹೇಗೆ ಹೊಗಳುತ್ತಾರೋ ಹಾಗೆ.

ದೇಗುಲದ ಗರ್ಭದಲ್ಲಿ, ಪೀಠದ ನೆರಳಿನಲ್ಲಿ,
ನಿಮ್ಮಲಿರೋ ಅತೀ ಸ್ವತಂತ್ರರು,
ತಮ್ಮ ಸ್ವಾತಂತ್ರ್ಯವನ್ನು ಹೆಗಲ
ಮೇಲಿನ ನೊಗದಂತೆ, ಕೈ ಬೇಡಿಯಂತೆ
ಧರಿಸಿದ್ದನ್ನು ನೋಡಿದ್ದೇನೆ.

ನನ್ನ ಹೃದಯದಿಂದ ರಕ್ತ ಹರಿದು ಬಂತು
ಯಾಕೆಂದ್ರೆ, ಯಾವಾಗ ಸ್ವಾತಂತ್ರ್ಯವನ್ನು
ಹುಡುಕುವುದು ಸಹ ನಿಮಗೆ ಭಾರವಗುತ್ತದೋ,
ಆಗ
ನೀವು ಸ್ವತಂತ್ರರು,

ಯಾವಾಗ ನೀವು ಸ್ವಾತಂತ್ರ್ಯವನ್ನು ಒಂದು
ಗುರಿ ಅಥವಾ ಸಾಕ್ಷಾತ್ಕಾರವಾಗಿ
ಸಹಿತ ಎಣಿಸುವುದಿಲ್ಲವೋ,
ಆಗ
ನೀವು ಸ್ವತಂತ್ರರು,

ನಿಜವಾಗಿ, ನಿಮ್ಮ ದಿನಗಳು ಯಾವುದೇ ಜವಾಬ್ದಾರಿ ಇಲ್ಲದೇ
ನಿಮ್ಮ ರಾತ್ರಿಗಳು ಆಸೆಯಿಲ್ಲದೆ ನೋವಿಲ್ಲದೇ
ಇರುವುದು ಸ್ವಾತ0ತ್ರ್ಯ ಅಲ್ಲ.

ಇವೆಲ್ಲ ನಿಮ್ಮ ಜೀವನವನ್ನು ಮುತ್ತಿ ಸುತ್ತಿ ಬಿಗಿದರೂ
ಅದನ್ನು ಮೀರಿ, ನಿರ್ಭಂಧವಾಗಿ
ನಿಷ್ಕಳ0ಕವಾಗಿ ಏಳುವುದೇನಿದೆ,-
ಅದು ಸ್ವಾತಂತ್ರ್ಯ.

ಅದಲ್ಲದೆ,
ಮಧ್ಯಾಹ್ನದ ಘಳಿಗೆಯಲ್ಲಿ ಬಂಧಿಸಿದ
ನಿಮ್ಮ ಮುಂಜಾವಿನ
ತಿಳುವಳಿಕೆಯ ಸರಪಳಿಯನ್ನು
ಹರಿಯದೆ, ಅದು ಹೇಗೆ ನಿಮ್ಮ
ಹಗಲೂ-ರಾತ್ರಿಗಳನ್ನು ಮೆಟ್ಟಿ
ಮೇಲೇರುತ್ತೀರಾ?

ಸತ್ಯ ಹೇಳಬೇಕಾದರೆ
ಯಾವುದು ನೀವು ಸ್ವಾತಂತ್ರ್ಯ ಅಂದುಕೊಂಡಿದ್ದೀರೋ
ಅದು, ಈ ಎಲ್ಲಾ ಬಂಧನಗಳ ಸರಪಳಿಗಳಲ್ಲಿ
ಅತೀ ಬಲಶಾಲಿಯಾದದ್ದು;

ಅದರ ಕೊಂಡಿಗಳೇನೋ ಹಗಲಲ್ಲಿ
ಹೊಳೆದು ನಿಮ್ಮ ಕಣ್ಣು ಕುಕ್ಕಿ
ಸೆಳೆದಿರಬಹುದು.

ಆದರೆ ನೀವು ಸ್ವತಂತ್ರರಾಗಬೇಕಾದರೆ,
ನೀವು ನಿಮ್ಮ ತುಣುಕುಗಳನ್ನೇ,
ತೆಗೆದುಹಾಕುವುದಲ್ಲದೇ ಮತ್ತೇನು?

ಕಾನೂನು ಅನ್ಯಾಯವಾಗಿದ್ದರೆ, ನೀವು ಅದನ್ನು
ರದ್ದು ಗೊಳಿಸುತ್ತೀರಿ;
ಆದರೆ ಆ ಕಾನೂನು ನಿಮ್ಮ ಕೈಯಾರೆ, ನೀವೇ ನಿಮ್ಮ
ಹಣೆಯ ಮೇಲೆ ಬರೆದಿದ್ದಾಗಿತ್ತು.

ನಿಮ್ಮ ನ್ಯಾಯ ಪುಸ್ತಕಗಳನ್ನು
ಸುಟ್ಟು, ದನ್ನು ತೆಗೆದು ಹಾಕಲಾಗುವುದಿಲ್ಲ.
ಅಥವಾ ನ್ಯಾಯಾಧೀಶನ ಹಣೆಮೇಲೆ
ಸಮುದ್ರ ಹೊಯ್ದ ತಿಕ್ಕಿ,
ತೊಳೆಯಲಾಗುವುದಿಲ್ಲ.

ಒಂದು ವೇಳೆ ನೀವು ಒಬ್ಬ ಕ್ರೂರ
ರಾಜನನ್ನು, ತೆಗೆದು ಹಾಕುವುದಾದರೆ
ಮೊದಲು, ನಿಮ್ಮ ಒಳಗೆ ಸ್ಥಾಪಿತವಾಗಿರುವ ಅವನ
ಸಿಂಹಾಸನವನ್ನು ಬಿಸಾಕಿ.
ಯಾಕೆಂದ್ರೆ, ಸ್ವತಂತ್ರರು ಮತ್ತು
ಸ್ವಾಭಿಮಾನಿಗಳನ್ನು ಯಾವ ಕ್ರೂರಿ
ದಬ್ಬಾಳಿಕೆ ಮಾಡಲು ಸಾಧ್ಯ?

ಅದು ಸಾಧ್ಯ,
ಅವರ ಸ್ವಾತಂತ್ರ್ಯದಲ್ಲೆ ದಬ್ಬಾಳಿಕೆ,
ಅದರ ಸ್ವಾಭಿಮಾನದಲ್ಲೇ ಅಪಮಾನ
ಇದ್ದರೆ ಮಾತ್ರ.

ಹಾಗೂ, ಒಂದು ವೇಳೆ ನೀವು ಬಿಡಬೇಕಾದ್ದು
ಜವಾಬ್ದಾರಿ ಅಂತಾದರೆ,
ಅದು ನಿಮ್ಮ ಮೇಲೆ ಹೊರಿಸಿದಕ್ಕಿಂತಲೂ
ಹೆಚ್ಚಾಗಿ ನೀವೇ ಆರಿಸಿ ಕೊಂಡಿದ್ದು.

ಮತ್ತೆ ಒಂದು ವೇಳೆ,
ನೀವು ತೊಗಲಿಸಬೇಕಾದ್ದು ಭಯ
ಅಂತಾದರೆ, ಆ ಭಯದ ಮೂಲ ಆಶ್ರಯ
ಹೆಚ್ಚಾಗಿ ನಿಮ್ಮ ಹೃದಯದಲ್ಲಿದೆ, ಹೆದರಿಸುವವನ
ಕೈಯಲ್ಲಲ್ಲ.

ಇದೆಲ್ಲವೂ ನಿಮ್ಮ ಗೊ0ದಲದ ಅಪ್ಪಿಗೆಯಲ್ಲಿ
ಸತತವಾಗಿ ಚಲಿಸುತ್ತಿದೆ-
ಆಸೆ ಪಟ್ಟಿದ್ದು ಮತ್ತು ಭಯ ಪಟ್ಟಿದ್ದು,
ಅಸಹ್ಯ ಪಟ್ಟಿದ್ದು ಮತ್ತು ಆನಂದ ಪಟ್ಟಿದ್ದು
ಅನುಸರಿಸಿ ಹೋಗಿದ್ದು, ಮತ್ತು ಬಿಟ್ಟು ಓಡಿದ್ದು,

ಇದು ನಿಮ್ಮೊಳಗೆ ಬೆಳಕು ಮತ್ತು
ನೆರಳು ಜೊತೆಯಾಗಿ ಚಲಿಸಿದಂತೆ
ಚಲಿಸುತ್ತವೆ.

ಯಾವಾಗ ನೆರಳು ಅಳಿಸಿ ಮಾಯವಾಗುತ್ತದೋ
ಆಗ ಇದ್ದುಳಿದ ಬೆಳಕು
ಇನ್ನೊಂದು ಬೆಳಕಿನ ನೆರಳಾಗುತ್ತದೆ.

ಹಾಗೇ, ನಿಮ್ಮ ಸ್ವಾತಂತ್ರ್ಯ ಯಾವಾಗ ಅದರ
ಬಂಧನಗಳನ್ನು ಕಳೆದುಕೊಳ್ಳುತ್ತದೋ
ಆಗ ಅದೇ ಇನ್ನೂ ದೊಡ್ಡದಾದ ಸ್ವಾತಂತ್ರ್ಯಕ್ಕೆ
ಬಂಧನವಾಗುತ್ತದೆ.

* * *

ಖಲಿಲ್ ಗಿಬ್ರಾನ್ - ಕನ್ನಡಕ್ಕೆ ಶೇಷಗಿರಿ ಹೆಗಡೆ 


Saturday, October 8, 2016

ನಾವಿಬ್ಬರೂ ಬೇರೆ ಆದಾಗ


ನಾವಿಬ್ಬರೂ ಬೇರೆ ಆದಾಗ
ನಿಶಬ್ಧದಲ್ಲಿ  ಕಣ್ಣೀರಿನಲ್ಲಿ
ಅರ್ಧ ಹೃದಯ ಒಡೆದವರಾಗಿ
ಅಗಲಿರಲು ವರುಷಗಳಕಾಲ
ಬಾಡಿತು ನಿನ್ನ ಕೆನ್ನೆ ,
 ಶೀತಲ , ಶೀತಲವಾಯಿತು ನಿನ್ನ ಮುತ್ತು
ನಿಜವಾಗಿ ಆ ನಿಮಿಷ
 ಭವಿಶ್ಯವಾಣಿ ಈ ದುಃಖಕ್ಕೆ

ಮುಂಜಾವಿನ ಹಿಮ ಕೊರೆಯಿತು
 ಛಳಿ ನನ್ನ ಹಣೆಯಮೇಲೆ
ಅನ್ನಿಸಿತು ಮುನ್ಸೂಚನಯಂತೆ
ಈ ನನ್ನ ಭಾವನೆಗಳಿಗೆ

ನಿನ್ನ ಭರವಸೆಗಳೆಲ್ಲ ಮುರಿದಿವೆ
ಹಗುರಾಗಿದೆ ನಿನ್ನ ಕೀರ್ತಿ
ಕೇಳುತ್ತಿದೆ ನಿನ್ನ ಹೆಸರು ಆಡಿಕೊಳ್ಳುವುದು
ಒಪ್ಪುತ್ತೇನೆ ನನ್ನ ಪಾಲು
ಈ ಅಪಮಾನದಲ್ಲಿ

ದೂರುತ್ತಾರೆ ಅವರು ನಿನ್ನನ್ನು, ನನಗಿಂತ ಮೊದಲು
ಭರ್ಚಿಯಂತಿದೆ ನನ್ನ ಕಿವಿಗೆ
ನಡುಕ ಬರುತ್ತಿದೆ ನನ್ನ ಮೈ ಮೇಲೆ
ನೀನೇಕೆ ಅಷ್ಟು ಪ್ರಿಯವಾಗಿದ್ದೆ ನನಗೆ?
ಅವರಿಗೆ ತಿಳಿದಿಲ್ಲ ನೀನು ನನಗೆ ಪರಿಚಿತ ಎಂದು
ನಿನ್ನಬಗ್ಗೆ ಬಹಳವೇ ತಿಳಿದಿತ್ತು ನನಗೆ

ಬಹಳ ಬಹಳ  ಕಾಲದವರೆಗೆ
ಶೋಕಿಸುತ್ತೇನೆ ನಾನು ನಿನ್ನನ್ನು
ದುಃಖಿಸುತ್ತೇನೆ ರಾತ್ರಿಯ ನಿಶ್ಶಬ್ಧದಲ್ಲಿ
ನಿನ್ನ ಹೃದಯ  ಮರೆಯಬಹುದು
ನಿನ್ನ ಜೀವ ಮೋಸಹೋಗಲಿ

ಒಂದುವೇಳೆ,  ಭೇಟಿಯಾದರೆ ನಿನ್ನ, ನಾನು
ಬಹಳ ವರುಷಗಳ ನಂತರ
ಹೇಗೆ ಕರೆಯಲಿ ನಾನು ನಿನ್ನ?
ಮೌನದಲ್ಲಿ  ಕಣ್ಣೀರಿನಲ್ಲಿ.


ಲಾರ್ಡ್ ಬೈರೋನ್ -
 ಕನ್ನಡಕ್ಕೆ ಶೇಷಗಿರಿ ಹೆಗಡೆ

Monday, February 1, 2016

ಸುಖ ಮತ್ತು ದುಃಖ


ನಿಮ್ಮ ಸುಖ, ಮುಖವಾಡ ತೆಗೆದ ನಿಮ್ಮ ದುಃಖ.
ಯಾವ ಬಾವಿಯ ಕೆಳಗಿ0ದ ನಿಮ್ಮ ನಗೆ ಈಗ
ಮೇಲೆ ಎದ್ದು ಪ್ರತಿಧ್ವನಿಸುತ್ತಿದೆಯೋ, ಬಹಳ ಬಾರಿ 
ಅದೇ ಬಾವಿ, ನಿಮ್ಮ ಕಣ್ಣೀರಿಂದ ತುಂಬಿತ್ತು.
ಮತ್ತೆ ಹೇಗಿರಲು ಸಾಧ್ಯ?
ದುಃಖ ನಿಮ್ಮ ಅಂತರಂಗವನ್ನು, ಆಳ
ಎಷ್ಟು ಕೊರೆಯುತ್ತದೆಯೋ
ಅಷ್ಟು ಹೆಚ್ಚು,
ಸುಖ ನಿಮ್ಮಲ್ಲಿ ಹಿಡಿಸುತ್ತದೆ.
ಈ ನಿಮ್ಮ ಕಪ್, ಮೊನ್ನೆತಾನೇ
ಕುಂಬಾರನ ಕುಲುಮೆಯಲ್ಲಿ
ಸುಟ್ಟಿದ್ದಲ್ಲವೇ?
ನಿಮ್ಮ ಮನಸ್ಸಿಗೆ ಮುದ ನೀಡುವ
ಈ ಕೊಳಲನ್ನು, ಚಾಕು
ಕೊರೆದು ಡೊಂಬ ಮಾಡಿಲ್ಲವೇ.
ನೀವು ಸಂತೋಷದಲ್ಲಿರುವಾಗ
ಹೃದಯದ ನಿಮ್ಮ ಆಳದಲ್ಲಿ, ನೋಡಿ ಇಣುಕಿ,
ನಿಮಗೆ ದುಃಖ ಕೊಟ್ಟಿದ್ದೇ ಈಗ ಸುಖ ಕೊಡುತ್ತಾ ಇದೆ.
ನೀವು ದುಃಖದಲ್ಲಿರುವಾಗ
ಮತ್ತೆ ನಿಮ್ಮ ಹೃದಯ ಇಣುಕಿ ನೋಡಿ,
ನಿಮಗೆ ಅರಿವಾಗುತ್ತದೆ,
ನೀವು ಅಳುತ್ತಿರುವುದು, ಹಿಂದೊಂದಿನ ಸಂತಸಕ್ಕಾಗಿ.
ನಿಮ್ಮಲ್ಲಿ ಕೆಲವರು ಹೇಳುತ್ತಾರೆ;
"ಸುಖ ದುಃಖಕ್ಕಿಂತ ಮೇಲು."
ಇನ್ನು ಕೆಲವರು ಹೇಳುತ್ತಾರೆ
"ಅಲ್ಲ ದುಃಖ, ಸುಖ ಸಂತೋಷಕ್ಕಿಂತ ಮೇಲು"
ಆದರೆ ನಾನು ನಿಮಗೆ ಹೇಳುತ್ತೇನೆ;
ಅವೆರಡೂ ಬೇರ್ಪಡಿಸಲಾಗಿದ್ದು
ಜೊತೆಗೆ ಬರುತ್ತೇವೆ ಅವು.
ಒ0ದು ನಿಮ್ಮ ಮಂಚದ ಮೇಲೆ ಹತ್ತಿರ ಕುಳಿತಿದ್ದರೆ
ನೆನಪಿಡಿ, ನಿಮ್ಮ ಹಾಸಿಗೆಯಮೇಲೆ ಇನ್ನೊಂದು
ಮಲಗಿದೆ.
ನಿಜವಾಗಿ ಹೆಳಬೇಕೆ0ದರೆ ಸುಖದುಃಖಗಳ ಮಧ್ಯದಲ್ಲಿ
ತಕ್ಕಡಿಯಂತೆ ತೂಗಾಡುತ್ತಿದ್ದೀರಿ ನೀವು.
ಬರಿದಾಗಿ ಇದ್ದಾಗ ಮಾತ್ರ ಸ್ತಬ್ಧ
ಸಮತೋಲನದಲ್ಲಿ ಕಾಣುತ್ತೀರಿ.
ಯಾವಾಗ, ಖಜಾನೆಯ ಮಾಲಿಕ
ಅವನ ಬೆಳ್ಳಿ ಬಂಗಾರ ತೂಕ
ಮಾಡಲು ನಿಮ್ಮನ್ನು ಮೇಲೆತ್ತುತ್ತಾನೋ
ಆಗ ನಿಮ್ಮ ಸುಖ ದುಃಖ
ಮೆಲೆ ಕೆಳಗೆ ಆಗಬೇಕು.

Tuesday, January 12, 2016

ಸಾಮಾಜಿಕ ಬಿಹೇವಿಯರ್ - ಅಸ್ಸರ್ಟಿವ್


ಡಾಕ್ಟರ್  ಕ್ರಿಗ್ತಾನ್ , ಲಂಡನ್ ನ ಬಿಷಪ್, ಅವರಿಗೆ ತಂಬಾಕು ಸೇದುವ ಚಟ ಇತ್ತು. ಒಂದು ದಿನ ಅವರು ಟ್ರೈನ್ ನಲ್ಲಿ ಪ್ರಯಾಣ  ಮಾಡ್ತಾ  ಇದ್ದರು. ಅವರಿದ್ದ   ಬೋಗಿಯಲ್ಲಿ ಇನ್ನೊಬ್ಬರೇ ಒಬ್ಬ, ತುಂಬಾ ಚಿಕ್ಕದಾದ  ಮತ್ತು ಮ್ರಿದು ಸ್ವಭಾವದ  ಸಹ ಪ್ರ ಯಾಣಿಕರಿದ್ದರು .  ಬಿಷಪ್ ಅವರು, ಅವರ ಸಿಗಾರ್ ಕೇಸು ತೆಗೆದು ಮುಗುಲ್ನೆಗೆಯಲ್ಲಿ ಕೇಳಿದರು .

" ನಾನು ತಂಬಾಕು ಸೇದುವುದು ತಮಗೇನು ಅಭ್ಯಂತರವಿಲ್ಲ ತಾನೇ?"

ಮ್ರಿದು ಸ್ವಾಭಾವ ದ ಪ್ರಯಾಣಿಕರು ಹೇಳಿದರು
"ದೊರೆಗಳೇ, ನನಗೆ ಅದರಿಂದ ತಲೆ ನೋವು ಬರುತ್ತದೆ . ಅದು  ತಮಗೆ ಅಭ್ಯಂತರ ಇಲ್ಲವಾದರೆ ... "

ಕ್ರಿಗ್ತಾನ್ , ಸಿಗಾರ್ ಒಳಗೆ ಇಟ್ಟರು .

ಅಸ್ಸರ್ಟಿವ್, ಒಂದು ತುಂಬಾ ಮುಖ್ಯ ವಾದ  ಕಲೆ ಅಥವಾ ಸಾಮಾಜಿಕ ಬಿಹೇವಿಯರ್ , ಸ್ಕಿಲ್.  ಮೇಲೆ  ಹೇಳಿರುವ  ಸಂಗತಿ  ಇದನ್ನು ಸ್ವಲ್ಪ ಮಟ್ಟಿಗೆ ತೋರಿಸಿಕೊಡುತ್ತದೆ.
ತುಂಬಾ ಸಣ್ಣ ಸ್ಕಿಲ್. ಆದರೆ ಇದನ್ನು  ಸರಿಯಾದ  ಸಂದರ್ಭದಲ್ಲಿ  ಉಪಯೋಗಿಸಲು  ಆಭ್ಯಾಸ ಬೇಕು .


Tuesday, January 5, 2016

ದಾನ - ಖಲಿಲ್ ಗಿಬ್ರಾನ್

ಕೆಲವರು ಎಷ್ಟೇ ಇದ್ದರೂ ಒಂದಿಷ್ಟೇ ಕೊಡುತ್ತಾರೆ,
ಅವರು ಮಾಡುವುದು ಕೀರ್ತಿಗೋಸ್ಕರ,
ಅವರ ಅಡಗಿದ ಈ ಆಸೆ
ಅವರ ದಾನವನ್ನು ಕುರೂಪಿಯಾಗಿಸುತ್ತದೆ.
ಮತ್ತೆ ಕೆಲವರಿದ್ದಾರೆ; ಅವರಿಗಿರುವುದೇ ಒಂದಿಷ್ಟು
ಅಷ್ಟೂ ದಾನ ಮಾಡುತ್ತಾರೆ.
ಅವರಿಗೆ ಜೀವನದಲ್ಲಿ ನಂಬಿಕೆ ಇದೆ.
ಅವರ ಖಜಾನೆ ಯಾವತ್ತೂ ಬರಿದಾಗುವುದಿಲ್ಲ.
ಹೀಗೆ ಕೆಲವರು, ಸಂತೋಷದಿಂದ ಕೊಡುತ್ತಾರೆ.
ಸಂತೋಷ, ಅವರ ಬಹುಮಾನ;
ಮತ್ತೆ ಕೆಲವರು ತುಂಬಾ ದುಃಖದಿಂದ ಕೊಡುತ್ತಾರೆ.
ದುಃಖ, ಅವರ ಶಿಕ್ಷೆ.
ಮತ್ತೆ ಕೆಲವರು ಕೊಡುತ್ತಾರೆ, ಅವರಿಗೆ
ದುಃಖ ಗೊತ್ತಿಲ್ಲ; ಸಂತೋಷ ಅವರು ಹುಡುಕುತ್ತಾ ಇಲ್ಲ.
ಪುಣ್ಯಪ್ರಜ್ಞೆಯಿಲ್ಲ ಅವರಲ್ಲಿ;
ಸಂಪಿಗೆ ಕಂಪು, ಆಕಾಶದಲ್ಲಿ ಹರಡಿದಂತೆ.
ಅವರು ದಾನ ಕೊಡುತ್ತಾರೆ.
ಅವರ ಕೈಗಳಿಂದ ದೇವರು ಮಾತನ್ನಾಡುತ್ತಾನೆ
ಮತ್ತು, ಅವರ ಕಂಗಳಿಂದ
ದೇವರು ನಗುತ್ತಾನೆ.
ಕೇಳಿದಾಗ ಕೊಡುವುದು, ಉತ್ತಮ.
ಆದರೆ ಕೇಳದಲೆ,
ತಿಳಿದು ಕೊಡುವುದು ಇನ್ನೂ ಉತ್ತಮ.
ಇ0ತಹ ದಾನಿಗಳಿಗೆ, ದಾನ ತೆಗೆದುಕೊಳ್ಳುವವರನ್ನು
ಹುಡುಕುವುದು, ದಾನ ಕೊಡುವುದಕ್ಕಿಂತಲೂ
ತುಂಬಾ ಹರುಷ.
ಹೀಗೆ ಕೊಡಲೇಬಾರದು ಅಂತೇನಾದರೂ ಇದೆಯಾ?
ಒಂದಲ್ಲಾ ಒಂದು ದಿನ
ನಮ್ಮಲ್ಲಿರುವುದೆಲ್ಲಾ ಕೊಟ್ಟು ಹೋಗುತ್ತದೆ.
ಹಾಗಾಗಿ, ಈಗಲೇ ಕೊಡು, ಕೊಡುವ ಕಾಲ ನಿನ್ನದು
ಬಹುಶಃ ನಿಮ್ಮ ಮುಂದಿನ ಪೀಳಿಗೆಯದಲ್ಲ.
ಪದೇ ಪದೇ ನೀವು ಹೇಳುತ್ತೀರಿ;
"ನಾನು ಕೊಡುತ್ತೇನೆ ಆದರೆ ಯಾರಿಗೆ ಅದರ
ಅವಶ್ಯಕತೆ ಇದೆಯೋ ಅವರಿಗೆ ಮಾತ್ರ."
ನಿಮ್ಮ ಕೊಪ್ಪಲಲ್ಲಿರುವ ಹಣ್ಣಿನ ಮರ
ಹಾಗೆ ಹೇಳುವುದಿಲ್ಲ, ಅಥವಾ ಬೇಣದಲ್ಲಿ ಮೆಯುತ್ತಿರುವ
ನಿಮ್ಮ ಆಕಳು ಹಾಗೆ ಹೇಳುವುದಿಲ್ಲ.
ಬದುಕಲು ಕೊಡುತ್ತಾರೆ ಅವರು ಏಕೆಂದರೆ,
ಕೊಡದೇ ಇರುವುದು, ನಿಮ್ಮ ನಾಶಕ್ಕೆ.
ಯಾರು ಹಗಲಿಗೂ ಇರುಳಿಗೂ ಯೋಗ್ಯನೋ
ಅವನು ನಿಮ್ಮ ಎಲ್ಲ ದಾನಗಳಿಗೂ
ಯೋಗ್ಯ, ಅದು ನಿಜ.
ಮತ್ತೆ ಯಾರು ಜೀವನ ಸಮುದ್ರವನ್ನು
ಕುಡಿಯಲು ಯೋಗ್ಯರೋ ಅವರು
ನಿಮ್ಮ ಹಳ್ಳದಿ0ದ ಅವರ
ಪಾತ್ರೆ ತುಂಬಿಸಿಕೊಳ್ಳಲೂ ಯೋಗ್ಯರು.
ಇನ್ನೊಬ್ಬರಿಂದ ದಾನ ತೆಗೆದುಕೊಳ್ಳುವುದಕ್ಕಿಂತಲೂ
ದೊಡ್ಡದಾದ ಬರ ಯಾವುದಿದೆ?
ನೀವು ಯಾರು ಅಂತ
ಅವರ ಹೃದಯ ಕಿತ್ತು,
ಅವರ ಅಭಿಮಾನ ನಿಮ್ಮೆದುರಿಗೆ ಇಟ್ಟು
ನಾಚಿಕೆ ಬಿಟ್ಟು ಅವರ ನಗ್ನ ಮಾನ
ನಿಮ್ಮೆದುರಿಗಿಡಬೇಕು?
ಅದಕ್ಕೂ ಮೊದಲು ದಾನ
ಕೊಡಲು ನೀವು ಯೋಗ್ಯರಾ, ಒಳ್ಳೆ ದಾನಿಯೇ ನೀವು?
ಅದನ್ನು ನೋಡಿಕೊಳ್ಳಿ.
ಏಕೆಂದರೆ, ಇಲ್ಲಿ ನಿಜ ಏನೆಂದರೆ,
ಒಂದು ಜೀವ ಇನ್ನೊಂದು ಜೀವಕ್ಕೆ
ಕೊಡುತ್ತಿದೆ.
ದಾನಿ ಅಂತ ನೀವು ತಿಳಿದಿದ್ದೀರಿ
ಆದರೆ, ಸತ್ಯದಲ್ಲಿ ನೀವು ಸಾಕ್ಷಿ ಮಾತ್ರ.

Tuesday, December 8, 2015

ಕನ್ನಡ ಚುಟುಕು ಕವಿತೆಗಳು - ಜಿ ವಿ ಹೆಗಡೆ




ಹಾಡು – ರಾಗ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಮಳೆಬಂತು ಕೊಡೆ ಇಲ್ಲ
ಕಡಲೆ ಉಂಟು ಹಲ್ಲಿಲ್ಲ
ಹಾಡುವದು ಗೊತ್ತು ರಾಗ ತಿಳಿದಿಲ್ಲ

ಮರೆವು – ಮಾರಿ (ಕವನ)
ಮರೆವು ಮಾರಿ
ನೆನಪು ಸಿರಿ
ಕಠೋರ ಮಾತು ಬಿಸಿ ಎಣ್ಣೆ
ಮೃದುತ್ವ ಬೆಣ್ಣೆ
ಬೇವು ಕಹಿ
ಬೆಲ್ಲ ಸಿಹಿ
ಕವನ ತುಪ್ಪ
ಕಾವ್ಯ ಹೋಳಿಗೆ
ಸೂರ್ಯ ಚಂದ್ರ ನೆನಪು
ನಕ್ಷತ್ರ ಹೆಸರು ಮರೆವು
ಕುಳಿತಲ್ಲೆ ಮರೆವು
ನಿಂತಲ್ಲೇ ನೆನಪು

ಕಡಿಮೆ - ಹೆಚ್ಚು
ಮಾತು ಮರೆವು
ಕೆಲಸ ಕಡಿಮೆ
ಸಂಪ್ರದಾಯ ಬಿಡಲು
ಸಂಕಟ ಹೆಚ್ಚು

download here the whole book 


ಒಂದು ಸಣ್ಣ ಸಹಾಯ - ಶೇಷಗಿರಿ ಹೆಗಡೆ.


ಒಂದು ಸಣ್ಣ ಸಹಾಯ 

ಸತೀಶ ದಾರಿ ಕ್ರಾಸ್ ಮಾಡಿ
ಬರುತ್ತಿದ್ದಾಗ ಅವನ ಸ್ವಲ್ಪ ಮುಂದೆ ಹೋಗ್ತಾ ಇದ್ದ
ಹುಡುಗ ಒಬ್ಬ,
ಟ್ರಿಪ್ ಆಗಿ, ಮುಗ್ಗರಿಸಿ ಬಿದ್ದ.

ನಾಲ್ಕು ಪುಸ್ತಕ, ಐದಾರು ಪಟ್ಟಿ, ಪೆನ್ನು
ಕ್ರಿಕೆಟ್ ಬಾಲು, ಪೇಸ್ಟ್, ಒಂದು
ಚಿಕ್ಕ ಟೇಪ್‍ರಿಕಾರ್ಡರ್, ಒ0ದು ಸ್ವೆಟರ್-
ಎಲ್ಲಾ ರಸ್ತೆಯ ಮೇಲಿತ್ತು
ಸತೀಶ, ಬಗ್ಗಿ ಒಂದೊಂದೇ ತೆಗೆದುಕೊಟ್ಟ.

ಅಂದ್ಹಾಗೆ ಇಬ್ಬರು ಒಂದೇ ಕಡೆಗೆ ಹೋಗ್ತಾ
ಇರೋದ್ರಿಂದ, ಸತೀಶ ಸ್ವಲ್ಪ ಸಾಮಾನು
ಎತ್ತಿಕೊಂಡ. ಮಾತು ಮಾತಿನಲ್ಲಿ
ಆ ಹುಡುಗನ ಹೆಸರು ಕಾರ್ತೀಕ ಅಂತ ತಿಳೀತು.

ಕಾರ್ತಿಕನ ಮನೆಗೆ ಇಬ್ಬರೂ ಹೋದರು
ಸ್ವಲ್ಪ ನಗೆಯಾಡಿದರು, ಪೆಪ್ಸಿ ಕುಡಿದರು,
ಟಿವಿಯಲ್ಲಿ ಕಾರ್ಟೂನ್ ನೋಡಿದರು,-
ಹೀಗೇ ಸತೀಶ ಮನೆಗೆ ಹೋಗುವಷ್ಟರಲ್ಲಿ
ಸುಮಾರು ಸಮಯ ಆಗಿತ್ತು.

ಸ್ಕೂಲಿಂದ ಬರುವಾಗ ಒಂದೆರಡು ಬಾರಿ ಸಿಕ್ಕಿ
ಮಾತಾಡಿದರು ಕೆಲವು ಬಾರಿ.

ಪಾರ್ಕ್‍ನಲ್ಲಿ ಕ್ರಿಕೆಟ್ ಆಟ ಆಡಿದರು. ಅಲ್ಲಲ್ಲಿ ಸಿಕ್ತಾ ಇದ್ರು.
ಒಂದೈದು ವರ್ಷದ ನಂತರ ಆಕಸ್ಮಿಕವಾಗಿ ಸಿಕ್ಕು
ಒಂದು ಶನಿವಾರ,
ದಾರೀ ಬದಿ ಸ್ಟಾಲ್‍ನಲ್ಲಿ ಮಸಾಲೆ ದೋಸೆ ತಿಂದರು.

ಎಸ್.ಎಸ್.ಎಲ್.ಸಿ ಮುಗಿಯುತ್ತಲೇ, ಕಾರ್ತಿಕ್
ಒಂದು ಪ್ಯಾಕ್ಟರಿಯಲ್ಲಿ ಸೇರಿಕೊಂಡ.
ಇದಾದ ಮೂರು ತಿಂಗಳಿಗೆ, ಅವನಿಗೆ
ಸತೀಶ, ಕಿರಣಿ ಅಂಗಡಿಯಲ್ಲಿ ಸಿಕ್ಕ.

ಕಾರ್ತಿಕ ಏನೋ ಮಾತನ್ನಾಡಬೇಕಂತ ಹೇಳಿದ್ದರಿಂದ
ಇಬ್ಬರೂ ಒಂದು ಬೆಂಚ್ ಮೇಲೆ
ಕುಳಿತು ಮಾತಾಡತೊಡಗಿದರು.

"ಸುಮಾರು ವರ್ಷದ ಹಿಂದೆ,
ನಾನು ದಾರಿ ಬದಿಗೆ ಬಿದ್ದಿದ್ದು ನೆನಪಿದೆಯಾ?
ಕಾರ್ತಿಕ್ ಕೇಳಿದ.
"ನಾನೆ ಯಾಕೆ ಹೋಗ್ತಾ ಇದ್ದಿರಬಹುದು
ಅಂತ ನಿನಗೆ ಯಾವಾಗಾದ್ರೂ
ಅನ್ನಿಸಿದೆಯಾ?"

ಅವೊತ್ತು ಸರ್ಕಾರಿ ಆಸ್ಪತ್ರೆಯಲ್ಲಿ
ನನ್ನಮ್ಮ ತೀರಿಕೊಂಡರು.

ಇರೋ ಸಾಮಾನು ನನ್ನ ಸ್ಕೂಲ್ ಬ್ಯಾಗಿನಲ್ಲಿ ತುಂಬಿ
ಬರುತ್ತ ಇದ್ದೆ, ಇರೋ ಒಬ್ಬ ಸಂಬಂಧಿ
ಅಮ್ಮ ಸತ್ತು ಕಣ್ಣೀರು ಬಂತು.
ಅವತ್ತು ರಾತ್ರಿ ವಿಷ ತಗೊಂಡು
ಸಾಯೋದು, ಅಂತ ಪ್ಲಾನ್ ಮಾಡಿದ್ದೆ.

ನಿಮ್ಮ ಜೊತೆ ನಕ್ಕಿದ್ದು, ಮಾತಾಡಿದ್ದಾಯ್ತು
ಸ್ವಲ್ಪ ಹಗೂರೆನಿಸಿತು.
ಈ ಜಗತ್ತಿನಲ್ಲಿ ಒಳ್ಳೆಯವರಿದ್ದಾರೆ.
ಗೆಳೆಯರಾಗುತ್ತಾರೆ, ದಿನ ಚನ್ನಾಗಿ
ಆಗಬಹುದು, ಅನ್ನಿಸಿತು.

ನೋಡು ಸತೀಶಾ, ನೀನವತ್ತು
ಬರೀ ಸಹಾಯವಷ್ಟೇ ಅಲ್ಲ ಮಾಡಿದ್ದು
ನನ್ನ ಜೀವವನ್ನು ಉಳಿಸಿದೆ.
  
ಶೇಷಗಿರಿ ಹೆಗಡೆ.


Saturday, November 14, 2015

ಅಪರಾಧ ಎಸಗುವವನು ನಿಮ್ಮವನಲ್ಲ


Khalil Gibran Poem - The Prophet

ಬಹಳ ಬಾರಿ ನೀವು ಹೇಳುವುದನ್ನು ಕೇಳಿದ್ದೇನೆ
ಅಪರಾಧ ಎಸಗುವವನು ನಿಮ್ಮವನಲ್ಲ,
ನಿಮಗೆ ಅಪರಿಚಿತ, ಮತ್ತು
ಪ್ರಪಂಚದಲ್ಲಿ ಒಳನುಗ್ಗುವ ನಿಮ್ಮ ಶತ್ರು.
ಆದರೆ ನಾನು ಹೇಳುತ್ತೇನೆ,
ಹೇಗೆ ಧಾರ್ಮಿಕತೆ ಮತ್ತು ಪವಿತ್ರತೆ
ನಿಮ್ಮ ಪ್ರತಿ ಒಬ್ಬರಲ್ಲಿರುವದಕ್ಕಿ0ತ ಹೆಚ್ಚು
ಎತ್ತರಕ್ಕೆ ಏರಲಾರದೋ, ಹಾಗೇ,
ದುಷ್ಟ ಮತ್ತು ಅಶಕ್ತ,
ಕನಿಷ್ಠ ಕೀಳುಮಟ್ಟಕ್ಕಿಂತ ಕೆಳಗೆ,
ಯಾವ ಕೀಳು ನಿಮ್ಮಲ್ಲಿಯೂ ಇದೆಯೋ - ಅದಕ್ಕಿಂತ
ಕೆಳಗೆ ಹೋಗಲಾರ.
ಹೇಗೆ, ಒಂದು ಎಲೆಯೂ,
ಸಂಪೂರ್ಣ ಮರದ ಮೌನ ಸಮ್ಮತಿಯಿಲ್ಲದೆ
ಹಳದಿಯಾಗಲಾರದೋ, ಹಾಗೆ,
ನಿಮ್ಮೆಲ್ಲರ ಗುಪ್ತ ಸಮ್ಮತಿಯಿಲ್ಲದೆ
ಅಪರಾಧಿ ತಪ್ಪು ಮಾಡಲಾರ.
ಮೆರವಣಿಗೆ ಒಂದು ಹೋದಂತೆ ನೀವು
ನಿಮ್ಮ ಆತ್ಮದ ಕಡೆ ಸಾಗುತ್ತಿದ್ದೀರಿ.
ನೀವು ದಾರಿಯೂ ಹೌದು, ದಾರಿ ಮಾಡುವವರೂ ಹೌದು.
ನಿಮ್ಮಲ್ಲಿ ಒಬ್ಬ ಕೆಳಗೆ ಬಿದ್ದಾಗ,
ಹಿಂದಿರುವ ಎಲ್ಲರ ಸಲುವಾಗಿ
ಬೀಳುತ್ತಾನೆ ಅವನು;
ಮೂಕರಿಸಿ ಬೀಳುವ ಸೂಚಕ ಅವನು.
ಅಯ್ಯೋ, ಅವನು ಅವನ ಮುಂದಿರುವವರ
ಸಲುವಾಗಿಯೂ ಬೀಳುತ್ತಾನೆ,
ದೃಢ ಹೆಜ್ಜೆಯ ಅವರು, ವೇಗವಾಗಿ
ಚಲಿಸುವವರಾದರೂ, ಮುಗ್ಗರಿಸಿದ
ಕಲ್ಲನ್ನು ತೆಗೆಯಲಿಲ್ಲವಲ್ಲ, ಹಾಗಾಗಿ.
ಕೊಲೆಯಾದವ ಅವನ ಕೊಲೆಗೆ
ಪೂರ್ಣ ಅ-ಜವಾಬ್ದಾರನಲ್ಲದೆ ಇಲ್ಲ.
ಕಳೆದುಕೊಂಡವ ಆ ಕಳ್ಳತನಕ್ಕೆ
ಪೂರ್ಣ ನಿರ್ದೋಶಕನಲ್ಲ

Thursday, November 12, 2015

ಒಬ್ಬಳು ಸುಂದರಿ ಮತ್ತು ಒಬ್ಬಳು ಕುರೂಪಿ

ಹೀಗೊಂದು ದಿನ ಸಮುದ್ರದ ತೀರದ ಮೇಲೆ ಒಬ್ಬಳು ಸುಂದರಿ ಮತ್ತು ಒಬ್ಬಳು ಕುರೂಪಿ ಮೀಟ್ ಆದರು.
ಸಂತೋಷದಲ್ಲಿ  "ನಾವು ಸಮುದ್ರದಲ್ಲಿ ಈಜಾಡೋಣ" ಅಂತ ಒಬ್ರಿಗೊಬ್ರು ಅಂದುಕೊಂಡರು.
ಸ್ವಲ್ಪ ಸಮಯ ಇಬ್ಬರೂ ಸಮುದ್ರದಲ್ಲಿ ಈಜಾಡಿದರು. ಮೊದಲು ಕುರೂಪಿ ಯುವತಿ ಸಾಕಾಗಿ ಮೇಲೆ ಬಂದವಳು, ಸುಂದರಿ ಯುವತಿಯ ಬಟ್ಟೆ ಹಾಕಿಕೊಂಡು ಹೊರಟು ಹೋದಳು. ಸ್ವಲ್ಪದರಲ್ಲೇ, ಸುಂದರ ಯುವತಿಯೂ ಸಾಕಾಗಿ ಬಂದಳು . ಅವಳ ಬಟ್ಟೆ ಮಾಯವಾಗಿತ್ತು. ಮನಸ್ಸಿಲ್ಲದಿದ್ದರೂ, ಬೇರೆ ದಾರಿಇಲ್ಲದ್ದರಿಂದ ಉಳಿದ ಕುರೂಪಿ ಬಟ್ಟೆಯನ್ನೇ ಹಾಕಿಕೊಂಡು ಅವಳೂ ಹೊರಟು ಹೋದಳು.
ಅದಕ್ಕಾಗಿ ಇವತ್ತಿನವರೆಗೂ, ಎಲ್ಲರೂ ಸುಂದರಿಯನ್ನು ಕುರೂಪಿಯೆಂದೂ, ಕುರೂಪಿಯನ್ನು ಸುಂದರಿಯೆಂದೂ ತಿಳಿಯುತ್ತಾರೆ.
ಸುಂದರಿ ಯುವತಿಯ ಮುಖವನ್ನು ನೋಡಿದ ಕೆಲವರು ಅವಳನ್ನು ಸರಿಯಾಗಿ ಗುರುತಿಸುತ್ತಾರೆ. ಹಾಗೆ ಕುರುಪಿಯ ಮುಖ ನೋಡಿದವರು ಅವಳನ್ನು ಗುರುತಿಸುವಲ್ಲಿ ಮೋಸ ಹೋಗುವದಿಲ್ಲ.

ಮಹಾ ಸಂತ ಕಾಲಿಲ್ ಗಿಬ್ರಾನ್.